ಕೈಲಾಸ 2	
	
ತಾಯಿನಾಡು ಪ್ರಕಾಶನ ಸಂಸ್ಥೆ 1963ರ ಆಗಸ್ಟ್ ತಿಂಗಳಲ್ಲಿ ಆರಂಭಿಸಿದ ಕನ್ನಡ ಮಾಸಪತ್ರಿಕೆ. ಕಿರೀಟ ಅಷ್ಟದಳಾಕಾರದ 148 ಪುಟಗಳ ಈ ಪತ್ರಿಕೆ ಜನಾಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಎಡೆಕೊಡುತ್ತಿತ್ತು. ಅದರಲ್ಲಿ ಕಾಣಬರುತ್ತಿದ್ದ ಲೇಖನ ವೈವಿಧ್ಯದಿಂದ, ಅದಕ್ಕೆ ಸರಿದೂಗುವಂತಿದ್ದ ವರ್ಣಚಿತ್ರಬಾಹುಳ್ಯದಿಂದ ಪತ್ರಿಕೆ ಬಹುಬೇಗ ಜನಪ್ರಿಯವಾಯಿತು. ಮೊದಲನೆಯ ಸಂಚಿಕೆಯನ್ನು ಪ್ರಾಯೋಗಿಕ ಸಂಚಿಕೆ ಎಂದು ಕರೆದು ಕನ್ನಡ ನಾಡಿನಲ್ಲೆಲ್ಲ ಉಚಿತವಾಗಿ ಹಂಚಿದ್ದು ಈ ಪತ್ರಿಕೆಯ ವೈಶಿಷ್ಟ್ಯ. ಇಂಥ ಪ್ರಯೋಗವನ್ನು ಬಹುಶಃ ಯಾವ ಪತ್ರಿಕೆಯೂ ಮಾಡಿಲ್ಲ. ಕಿರಿಯ ಬರಹಗಾರರ ಬೆನ್ನು ತಟ್ಟಿ ಹೊಸ ಲೇಖಕರ ಒಂದು ಪೀಳಿಗೆಯನ್ನು ಪತ್ರಿಕೆ ನಿರ್ಮಿಸಿತು. ಬರಹಗಾರರಲ್ಲದಿದ್ದರೂ ಜೀವನದ ಹಲವಾರು ಕ್ಷೇತ್ರಗಳಲ್ಲಿ ಕೆಲಸಮಾಡಿ ಅಪೂರ್ವವಾದ, ಸ್ವಾರಸ್ಯಕರವಾದ ಅನುಭವಗಳನ್ನು ಪಡೆದಿರತಕ್ಕವರಿಂದ ವಿಷಯ ಸಂಗ್ರಹಿಸಿ, ಲೇಖನಗಳನ್ನು ಪ್ರಕಟಿಸುವುದರಲ್ಲಿ ಕೈಲಾಸ ಹೊಸ ಹಾದಿಯನ್ನೇ ತೆರೆಯಿತೆನ್ನಬೇಕು. ಎನ್.ಎಸ್.ಸೀತಾರಾಮಶಾಸ್ತ್ರಿ, ಎಸ್.ವೆಂಕಟರಾವ್ ಇವರ ಸಂಯುಕ್ತ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಈ ಪತ್ರಿಕೆ 1967ರಲ್ಲಿ ನಿಂತುಹೋಯಿತು.              				(ವಿ.ಇ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ